ಕೆಂಜಾರು ಬಜ್ಪೆ ಬಳಿ ವಿಮಾನ ದುರಂತ ಸಂಭವಿಸಿ (air india express crash mangalore) ಇಂದಿಗೆ13 ವರ್ಷ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಗರದ ಕೂಳೂರು- ತಣ್ಣೀರುಬಾವಿ ಬಳಿಯ ಉದ್ಯಾನವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ವಿಮಾನ ಅಪಘಾತದಲ್ಲಿ ಮಡಿದ 158 ಜನರ ನೆನಪಿಗಾಗಿ ನಿರ್ಮಾಣ ಮಾಡಿರುವ ಪಾರ್ಕ್ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2010ರ ಮೇ 22ರಂದು ಬೆಳಗ್ಗೆ 6.20ರ ಸಮಯ. ದುಬೈನಿಂದ ಮಂಗಳೂರು ಏರ್ ಪೋರ್ಟ್ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಅಪಘಾತಕ್ಕೀಡಾಗಿತ್ತು. ಕೂಡಲೆ ವಿಮಾನ ಪೂರ್ತಿ ಅಗ್ನಿ ಆವರಿಸಿದ್ದು, ಅದರಲ್ಲಿದ್ದ 158 ಮಂದಿ ಸಜೀವ ದಹನವಾಗಿದ್ದರು. ಕೇವಲ 8 ಮಂದಿಯಷ್ಟೇ ಬದುಕಿ ಉಳಿದಿದ್ದರು. ನಸುಕಿನ ನಿದ್ರೆಯಲ್ಲಿದ್ದವರು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದ್ದರು.