Kannada

ಇಪ್ಪತ್ತೊಂಬತ್ತು ಶಾಸಕರ ಸೇರ್ಪಡೆಯೊಂದಿಗೆ ಮೂವತ್ತಕ್ಕೆ ಏರಿದ ಬಸವರಾಜ ಬೊಮ್ಮಾಯಿ ಸಂಪುಟ ಬಲ

WhatsApp Group Join Now
Telegram Group Join Now

 

ಬೆಂಗಳೂರು: ಇಪ್ಪತ್ತೊಂಬತ್ತು ಶಾಸಕರ ಸೇರ್ಪಡೆಯೊಂದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಂಪುಟ ಬಲ ಇಂದು ಮೂವತ್ತಕ್ಕೆ ಏರಿದೆ.

ರಾಜಭವನದ ಗಾಜಿನ ಮನೆಯಲ್ಲಿ ಇಂದು ಮಧ್ಯಾಹ್ನ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಗೋವಿಂದ ಮುಕ್ತಪ್ಪ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ ಕತ್ತಿ. ಎಸ್. ಅಂಗಾರ, ಜೆ. ಸಿ. ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ಮುರುಗೇಶ್ ರುದ್ರಪ್ಪ ನಿರಾಣಿ.

ಅರೆಬೈಲ್ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಬಿ. ಎ. ಬಸವರಾಜ ( ಬೈರತಿ ಬಸವರಾಜ್ ), ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎನ್. ನಾಗರಾಜ್ ( ಎಂ.ಟಿ.ಬಿ. ನಾಗರಾಜ್ ) ಕೆ.ಸಿ. ನಾರಾಯu ಗೌಡ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಮುನಿರತ್ನ ಅವರು ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಸ್ವೀಕರಿಸುವುದರೊಂದಿಗೆ ಜುಲೈ 28 ರಂದು ಅಸ್ತಿತ್ವಕ್ಕೆ ಬಂದ ಬಸವರಾಜ ಬೊಮ್ಮಾಯಿ ಅವರ ಏಕ-ಸದಸ್ಯ ಸಚಿವ ಸಂಪುಟ ಪೂರ್ಣ ಪ್ರಮಾಣದ ರೂಪ ಪಡೆಯಿತು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸುಮಾರು 75 ನಿಮಿಷಗಳ ಕಾಲ ನಡೆದ ಈ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಡಾ ಉಮೇಶ್ ಜಾಧವ್ ಒಳಗೊಂಡಂತೆ ಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಗಮನಾರ್ಹ ಅಂಶಗಳು !

ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ಅಂಗ ವಸ್ತ್ರವನ್ನು ತೊಟ್ಟಿದ್ದರು.

ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಪ್ರಭು ಚವ್ಹಾಣ್ ಅವರು ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು.

ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರು ಏಕೈಕ ಮಹಿಳಾ ಸದಸ್ಯೆಯಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಎಲ್ಲಾ ಸಚಿವರೂ ಕನ್ನಡ ಭಾಷೆಯಲ್ಲಿಯೇ ಹಾಗೂ ದೇವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ಒಂದು ವಿಶೇಷವಾದರೆ ಮುರುಗೇಶ್ ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನ ಕೊಪ್ಪ ಅವರು ದೇವರ ಜೊತೆಗೆ ರೈತರ ಹೆಸರು ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಅರೆಬೈಲ್ ಶಿವರಾಂ ಹೆಬ್ಬಾರ್ ಹಾಗೂ ಶಶಿಕಲಾ ಜೊಲ್ಲೆ ಅವರು ದೇವರ ಜೊತೆಗೆ ಕ್ಷೇತ್ರದ ಜನರ ಹೆಸರಲ್ಲೂ ಪ್ರಮಾಣ ಮಾಡಿದರು.

ಆನಂದ್ ಸಿಂಗ್ ಅವರು ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಹಾಗೂ ಬಿ ಸಿ. ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪ್ರಭು ಚೌವ್ಹಾಣ್ ಅವರು ಗೋಮಾತೆ ಹಾಗೂ ಸಂತ ಸೇವಾಲಾಲ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಚಿವರಿಗೂ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಹೂ-ಗುಚ್ಛ ನೀಡಿ ಖುದ್ದು ಅಭಿನಂದಿಸಿ ಶುಭ ಹಾರೈಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

WhatsApp Group Join Now
Telegram Group Join Now

Related Posts

1 of 7
error: Content is protected !!