ವಾಯವ್ಯ ಸಾರಿಗೆ ಸಂಸ್ಥೆ ಆರಂಭಿಸಿರುವ ವಾರಾಂತ್ಯ ಹಾಗೂ ರಜೆ ದಿನಗಳ ವಿಶೇಷ ಪ್ಯಾಕೇಜ್ ಟೂರ್ ಬಸ್ ಗೆ ಸಾರ್ಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಈ ವ್ಯವಸ್ಥೆಯನ್ನು ಇತರೆ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬರುತ್ತಿದೆ.ಈ ಹಿನ್ನೆಲೆಯಲ್ಲಿ ಮುರ್ಡೇಶ್ವರ ಮತ್ತು ಚಾಲುಕ್ಯರ ನಾಡಿಗೆ ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಕೋವಿಡ್ ಎರಡನೆ ಅಲೆ, ಮಕ್ಕಳಿಗೆ ತರಗತಿ-ಪರೀಕ್ಷೆಗಳು ಹಾಗೂ ಹಿರಿಯರಿಗೆ ವರ್ಕ್ ಫ್ರಂ ಹೋಂ ನಿಂದಾಗಿ ಎಲ್ಲರೂ ತಿಂಗಳುಗಟ್ಟಲೆ ಮನೆಯಲ್ಲಿ ಬಂಧಿಯಾಗಿದ್ದರು. ಇದರಿಂದ ಅನೇಕರಲ್ಲಿ ಒಂಟಿತನ, ಖಿನ್ನತೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗಿತ್ತು. ಇದೀಗ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಲಾಕ್ ಡೌನ್ ನಿರ್ಬಂಧಗಳು ಸಡಿಲಿಕೆಯಾಗಿವೆ. ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದೆ. ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದಿದೆ.ಸಧ್ಯ ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಆದರೆ ಇದು ಕೆಲ ದಿನಗಳ ಅವಧಿಗೆ ಮಾತ್ರ ಸೀಮಿತ.
ಮುಂದಿನ ತರಗತಿಗಳಿಗೆ ಪ್ರವೇಶ,ಸಿಇಟಿ,ನೀಟ್ ಮತ್ತಿತರ ಪರೀಕ್ಷೆಗಳ ತಯಾರಿಗೆ ಮಕ್ಕಳೊಂದಿಗೆ ಪೋಷಕರಿಗೂ ಸಹ ಮಾನಸಿಕ ಸಿದ್ಧತೆಯ ದಾವಂತ. ಅಷ್ಟರೊಳಗೆ ಕುಟುಂಬದವರೆಲ್ಲ ಸೇರಿ ಒಂದು ಸುತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಿ ಬರುಬೇಕೆನ್ನುವುದು ಅನೇಕರ ಬಯಕೆ.
ಇಬ್ಬರು,ಮೂವರು ಸ್ವಂತ ವಾಹನದಲ್ಲಿ ತೆರಳುವುದು ಹೆಚ್ಚು ವೆಚ್ಚದಾಯಕ ಮತ್ತು ಮಳೆಗಾಲದಲ್ಲಿ ಸ್ವಯಂ ವಾಹನ ಚಾಲನೆ ಕಷ್ಟಕರ. ಪ್ರತಿಯೊಂದು ಸ್ಥಳಕ್ಕೆ ಪ್ರತ್ಯೇಕವಾಗಿ ವೀಕ್ಷಣೆಗೆ ಹೋದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಬಹಳಷ್ಟು ಸಮಯ ಕಾಯುವುದು ಮತ್ತು ಪ್ರಯಾಣದಲ್ಲೇ ಕಳೆದುಹೋಗುತ್ತದೆ.ಅಲ್ಲದೆ ಸಣ್ಣಪುಟ್ಟ ಲಗ್ಗೇಜ್ ನ್ನು ಜತೆಯಲ್ಲೇ ಹೊತ್ತೊಯ್ಯಬೇಕಾದ ಅನಿವಾರ್ಯತೆ. ಈ ವಿಶೇಷ ಬಸ್ ಗಳಿಗೆ ನಿಗದಿಪಡಿಸಿರುವ ಪ್ರಯಾಣ ದರವೂ ಮಿತ ವ್ಯಯಕರ. ಹೀಗಾಗಿ ಪ್ಯಾಕೇಜ್ ಟೂರ್ ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಧಾರ್ಮಿಕ, ಐತಿಹಾಸಿಕ ಸ್ಥಳ ಮಹತ್ವದೊಂದಿಗೆ ಮನರಂಜನೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವಯೋಮಾನದವರಿಗೆ ಆಕರ್ಷಕವಾಗುವಂತೆ ಸುಲಭ ದರದಲ್ಲಿ ಕರಾವಳಿ ಭಾಗದ ಮುರುಡೇಶ್ವರ ಮತ್ತು ಚಾಲುಕ್ಯರ ನಾಡಿಗೆ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಬಸ್ ಯೋಜನೆ
ರೂಪಿಸಲಾಗಿದೆ.ಇದಕ್ಕಾಗಿ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿದ ಹೊಸ ಬಸ್ ಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯಾ ಪ್ರದೇಶಗಳ ಮಾಹಿತಿ, ಚಾಲನಾ ಅನುಭವವಿರುವ ಚಾಲಕ- ನಿರ್ವಾಹಕರನ್ನು ನಿಯೋಜಿಸಲಾಗುತ್ತದೆ.ಯಾತ್ರಿಗಳ ಬಳಕೆಗೆ ಸ್ಯಾನಿಟೈಸರ್ ನೀಡಲಾಗುತ್ತದೆ.
ಈ ವಿಶೇಷ ಬಸ್ ಗಳು ಪ್ರತಿ ಭಾನುವಾರ ಮತ್ತು ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಟೂರ್ ಪ್ಯಾಕೇಜ್ 1: “ಚಾಲುಕ್ಯ ದರ್ಶಿನಿ”. ಈ ಬಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 7-30ಕ್ಕೆ ಹೊರಡುತ್ತದೆ.
ಬದಾಮಿ ವಿಶ್ವ ಪ್ರಸಿದ್ದ “ಮೇಣ ಬಸದಿ” ಗುಹಾಂತರ ದೇವಾಲಯಗಳು,ಕಲ್ಯಾಣಿ ವೀಕ್ಷಣೆ, ಬನಶಂಕರಿ ದೇವಸ್ಥಾನ ದರ್ಶನ ಮುಗಿಸಿಕೊಂಡು ಶಿವಯೋಗ ಮಂದಿರ ತಲುಪುತ್ತದೆ. ಅಲ್ಲಿ ವೀರಶೈವ ವಟುಗಳ ಸಂಸ್ಕೃತ ಪಾಠಶಾಲೆ, ಮತ್ತು ವಿಭೂತಿ ತಯಾರಿಕೆ ಕೇಂದ್ರಕ್ಕೆ ಭೇಟಿ, ವಿಶ್ವದಲ್ಲಿಯೇ ಎರಡನೇ ಬೃಹತ್ ತೇರಿನ ದರ್ಶನ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.ಮಧ್ಯಾಹ್ನದಿಂದ “ದಕ್ಷಿಣ ಕಾಶಿ” ಮಹಾಕೂಟೇಶ್ವರ ದರ್ಶನ, ಪಟ್ಟದಕಲ್ಲು ಬೃಹತ್ ಬಸವಣ್ಣ ಶಿಲಾ ಮೂರ್ತಿ ದರ್ಶನ ಮತ್ತು ಐಹೊಳೆಯಲ್ಲಿ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮುಗಿಸಿಕೊಂಡು ಹುಬ್ಬಳ್ಳಿಗೆ ಸಂಜೆ 7-30ಕ್ಕೆ ಆಗಮಿಸುತ್ತದೆ. ಪ್ರತಿಯೊಂದು ಸ್ಥಳವೀಕ್ಷಣೆಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಪ್ರಯಾಣ ದರ ರೂ.320.
ಟೂರ್ ಪ್ಯಾಕೇಜ್ 2 : ಈ ಬಸ್ ಬೆಳಿಗ್ಗೆ 7-00ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ.
ಶಿರಸಿ ಮಾರಿಕಾಂಬಾ ದೇವಸ್ಥಾನ ಮತ್ತು ಇಡಗುಂಜಿ ಮಹಾಗಣಪತಿ ದೇವಸ್ಥಾನ ದರ್ಶನ ಮುಗಿಸಿಕೊಂಡು ಮಧ್ಯಾಹ್ನ ಮುರ್ಡೇಶ್ವರಕ್ಕೆ ತಲುಪುತ್ತದೆ. ಅಲ್ಲಿ ವಿಶ್ವ ವಿಖ್ಯಾತ ಬೃಹತ್ ಗೋಪುರ ವೀಕ್ಷಣೆ,ಬೆಟ್ಟದ ಮೇಲಿನ ಭವ್ಯ ಶಿವನ ಮೂರ್ತಿ ದರ್ಶನ, ಭೂ- ಜಲ ಸಂಗಮದ ವಿಹಂಗಮ ಪ್ರಕೃತಿ ಸೌಂದರ್ಯ ವೀಕ್ಷಣೆ, ಬೀಚ್ ನಲ್ಲಿ ಮನರಂಜನೆ, ಊಟೋಪಚಾರಕ್ಕೆ ಗೆ ಸಾಕಷ್ಟು ಕಾಲಾವಕಾಶವಿರುತ್ತದೆ. ಸಂಜೆ 4-00ಕ್ಕೆ ಮುರ್ಡೇಶ್ವರದಿಂದ ಹೊರಟು ಹೊನ್ನಾವರ ಬಳಿ ಇಕೋ ಬೀಚ್ ವೀಕ್ಷಣೆ ಮಾಡಿಕೊಂಡು
ಸಂಜೆ 9-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ರೂ.530
ಮುಂಗಡ ಬುಕ್ಕಿಂಗ್
ಈ ವಿಶೇಷ ಬಸ್ ಗಳಿಗೆ www. ksrtc.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಮತ್ತು ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ರಿಸರ್ವೇಶನ್ ಕೌಂಟರ್ ಗಳಲ್ಲಿ ಮತ್ತು ಖಾಸಗಿ ಫ್ರಾಂಚೈಸಿ ಕೌಂಟರ್ ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊನೆ ಕ್ಷಣದಲ್ಲಿ ಪ್ರವಾಸ ತೆರಳುವವರು ಬಸ್ ನಲ್ಲಿ ನಿರ್ವಾಹರಿಂದ ಟಿಕೆಟ್ ಪಡೆಯಬಹುದು.
ಒಂದು ವೇಳೆ ಯಾವುದೇ ವಿಶೇಷ ಬಸ್ ಗೆ ಪ್ರವಾಸಿಗರ ಸಂಖ್ಯೆ ನಿಗದಿಗಿಂತ ಹೆಚ್ಚಾದರೆ ಅದೆ ದಿನ ಮತ್ತೊಂದು ವಿಶೇಷ ಬಸ್ ವ್ಯವಸ್ಥೆಯನ್ನೂ ಸಹ ಮಾಡಲಾಗುತ್ತದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ-ಖಾಸಗಿ ನೌಕರರು, ಸಂಘ-ಸಂಸ್ಥೆಗಳು ಮತ್ತಿತರ 30ಕ್ಕಿಂತ ಹೆಚ್ಚಿನ ಜನರು ಒಟ್ಟಿಗೆ ತೆರಳಲು ಇಚ್ಚಿಸಿದರೆ ಅವರು ಬಯಸುವ ದಿನ ಮತ್ತು ಸಮಯಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಬಸ್ ನಿಲ್ದಾಣ ಅಧಿಕಾರಿಯನ್ನು 7760991662 / 7760991682ರಲ್ಲಿ ಅಥವ ಘಟಕ ವ್ಯವಸ್ಥಾಪಕ ರನ್ನು 7760991677 /77609916678ರಲ್ಲಿ ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.