ಮೈಸೂರು: ಪಕ್ಷದ್ರೋಹಿಗಳು ಮತ್ತು ಅಧಿಕಾರ ಲಾಲಸಿಗಳನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು, ಜನಸೇವೆಯ ಗುರಿ ಇದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ರಾಜಕಾರಣದಲ್ಲಿ ಅಧಿಕಾರಕ್ಕಿಂತ ಸೈದ್ಧಾಂತಿಕ ಬದ್ಧತೆ ಮುಖ್ಯ ಎಂದು ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಎಂದರೆ ಒಂದು ಚಳವಳಿ. ಸಾರ್ವಜನಿಕ ಹಿತಾಸಕ್ತಿಯ ಪರ ಮತ್ತು ಅನ್ಯಾಯದ ವಿರುದ್ಧ ಹೋರಾಟ ನಡೆಸುವ, ಸಂಕಷ್ಟದಲ್ಲಿರುವ ದೇಶದ ಜನರ ಧ್ವನಿಯಂತೆ ಕೆಲಸ ಮಾಡುವ ಪಕ್ಷ ನಮ್ಮದು. ನಮ್ಮ ಈ ಹೋರಾಟ ನಿರಂತರ ಎಂದಿರುವ ಅವರು ಸೈದ್ಧಾಂತಿಕ ಬದ್ಧತೆಯೇ ಮುಖ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸಕಾ೯ರವನ್ನು ಕೆಡವಿ ಬಿಜೆಪಿ ಸಕಾ೯ರ ಬರಲು ಕಾರಣರಾದವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಕೋವಿಡ್ ಮೂರನೇ ಅಲೆಯ ಬಗ್ಗೆ ಪ್ರಸ್ತಾಪಿಸಿದ ಅವರು ಕೊರೊನಾ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಬರುವ ಮಾಹಿತಿ ಇದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕು ತಗುಲಿಲ್ಲ ಎಂದು ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡದೆ, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಹೇಳುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜಿನ ಪ್ರಕಾರ ಮೂರೂವರೆ ಲಕ್ಷ ಮಂದಿ ಸತ್ತಿರಬಹುದು. ಹಾಗಾಗಿ ಸರ್ಕಾರ ಕೊರೊನಾ ಸಾವಿನ ಗಣತಿ ನಡೆಸಬೇಕು ಎಂದು ಆಗ್ರಹಿಸಿದರು.
ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ ಮಾಡಿರುವ ತೆರಿಗೆ ರೂ.1.20 ಲಕ್ಷ ಕೋಟಿ. ಜನರ ಕಷ್ಟ ಅರ್ಥಮಾಡಿಕೊಂಡು ಈಗಲಾದರೂ ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.