ಹುಬ್ಬಳ್ಳಿ: ನವಲಗುಂದ ತಾಲೂಕು: ನವಲಗುಂದ ತಾಲೂಕಿನ ಮೊರಬ-ಗುಮ್ಮಗೋಳ ರಸ್ತೆ ಬಂದ್ ಆಗಿರುವುದರಿಂದ ಬೆಣ್ಣೆಹಳ್ಳದಲ್ಲಿ ಇಂದು ಬೆಳಿಗ್ಗೆ 350 ಕುರಿಗಳು ಹಾಗೂ 8 ಜನ ಕುರಿಗಾರರು ಸಿಲುಕಿರುವ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣ ಅಗ್ನಿಶಾಮಕ ದಳದವರು ಹಾಗೂ ತಹಶೀಲ್ದಾರರು ಕ್ರಮವಹಿಸಿ ಅವರೆಲ್ಲರನ್ನು ರಕ್ಷಿಸಿ ಸುರಕ್ಷಿತವಾಗಿ ಕಾಪಾಡಿದ್ದಾರೆ. ಮತ್ತು ಸುಮಾರು 15 ಕುರಿಗಳು ನೀರಿನಲ್ಲಿ ತೇಲಿ ಹೋಗಿವೆ ಎಂದು ತಿಳಿದು ಬಂದಿದ್ದು, ಈ ಕುರಿತು ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಅಗತ್ಯವಿದ್ದಲ್ಲಿ ನವಲಗುಂದ ಪಟ್ಟಣದಲ್ಲಿ ನಾಲ್ಕು ಹಾಗೂ ಎಲ್ಲ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತಾಲೂಕು ಆಡಳಿತಕ್ಕೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದರು.
180 ಕುರಿಗಳ ರಕ್ಷಣೆ
ಕುಂದಗೋಳ ತಾಲೂಕು : ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 180 ಕುರಿಗಳನ್ನು ರಕ್ಷಿಸಲಾಗಿದೆ. ಕೂಬಿಹಾಳ ಗ್ರಾಮದಲ್ಲಿ ಅತೀ ಮಳೆಯಿಂದಾಗಿ ಸುಮಾರು 20 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಮತ್ತು ಅಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.
ಕಲಘಟಗಿ ಹಾಗೂ ಧಾರವಾಡ, ಹುಬ್ಬಳ್ಳಿ ತಾಲೂಕಿನಲ್ಲಿ ಮಳೆ ನಿರಂತರವಾಗಿದ್ದು, ವಿವಿಧ ಗ್ರಾಮಗಳಲ್ಲಿ ಕೆಲವು ಮನೆಗಳು ಭಾಗಶ: ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಹೆಚ್ಚಿನ ಹಾನಿ ಉಂಟಾಗಿರುವುದಿಲ್ಲ ಎಂದು ಅವರು ತಿಳಿಸಿದರು.