State News

ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ಕೊಟ್ಟ ಪ್ರಧಾನಿ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ

WhatsApp Group Join Now
Telegram Group Join Now

ಬೆಂಗಳೂರು: ಭಾರತದಲ್ಲಿ ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡಿದರೂ ದೇಶದ ಜನರಿಗೆ ಅದರ ಪ್ರಯೋಜನ ಸಿಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, 46 ಕೋಟಿ ಜನರ ಬ್ಯಾಂಕ್ ಖಾತೆಗಳನ್ನು ಜನಧನ್ ಯೋಜನೆಯಡಿ ತೆರೆಸಿ ನೇರ ನಗದು ವರ್ಗಾವಣೆಯನ್ನು (ಡಿಬಿಟಿ) ಅನುಷ್ಠಾನಕ್ಕೆ ತಂದರು. ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಇಲ್ಲದ ಯೋಜನೆ ಇದಾಗಿದೆ. ಭ್ರಷ್ಟಾಚಾರದಲ್ಲೇ ಮುಳುಗಿದ್ದ ಕಾಂಗ್ರೆಸ್ ಮುಖಂಡರು ಮತ್ತು ನಾಯಕರು ಇದರಿಂದ ವಿಲವಿಲ ಒದ್ದಾಡುವಂತಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರೂ ನಳಿನ್‍ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಮಟ್ಟದ ಇ ಪ್ರಶಿಕ್ಷಣ ಚಿಂತನ ವರ್ಗದಲ್ಲಿ ವೆಬೆಕ್ಸ್ ಮೂಲಕ ಮಾತನಾಡಿದ ಅವರು, ಒಂದು ದೇಶದಲ್ಲಿ ಎರಡು ಕಾಯ್ದೆ ಇರಬಾರದು ಎಂಬ ಚಿಂತನೆ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರದಾಗಿತ್ತು. ಅದನ್ನು ವಿಶ್ವವಂದ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಮೂಲಕ ಈಡೇರಿಸಿದ್ದಾರೆ ಎಂದರು.

ದೇಶದ ಸಾರ್ವಭೌಮತೆ ಮತ್ತು ಏಕತೆಗೆ ವಿಶಿಷ್ಟ ಕೊಡುಗೆ ನೀಡಿದ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಕನಸನ್ನು ನನಸಾಗಿಸುವತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ನಮ್ಮ ಕಾರ್ಯಕರ್ತರು ಮತ್ತು ಜನರಿಗೆ ಮಾಹಿತಿ ಕೊಡಬೇಕಾಗಿದೆ ಎಂದು ಕರೆ ನೀಡಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರವು ರೈತರಿಗೆ ನೆರವಾಗುತ್ತಿದೆ. ರೈತರು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು. ಹಿಂದೆ ರಾಜ್ಯದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ವಿಮಾನನಿಲ್ದಾಣಗಳಿದ್ದವು. ಈಗ ಉಡಾಣ್ ಯೋಜನೆಯಡಿ ಹುಬ್ಬಳ್ಳಿ, ಬೆಳಗಾವಿ, ತೋರಣಗಲ್, ಬೀದರ್ ಮತ್ತು ಕಲಬುರ್ಗಿಯಲ್ಲಿ ವಿಮಾನನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಕೇಂದ್ರ ಸರಕಾರದ ಮಹತ್ವದ ಕೊಡುಗೆ ಎಂದು ವಿವರಿಸಿದರು.
ಜಲ ಮಿಷನ್ ಯೋಜನೆಯು ಪ್ರಧಾನಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದರಡಿ ಲಕ್ಷಾಂತರ ಹಳ್ಳಿಗಳಿಗೆ ಪ್ರಯೋಜನ ಲಭಿಸಲಿದೆ. ಉಜಾಲಾ ಯೋಜನೆಯಡಿ ಲಕ್ಷಾಂತರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮೂಲಸೌಕರ್ಯ ಹೆಚ್ಚಳಕ್ಕೆ ಭಾರತವು ಕಳೆದ ಏಳು ವರ್ಷಗಳಲ್ಲಿ ಗರಿಷ್ಠ ಆದ್ಯತೆ ನೀಡಿದೆ. ಅತ್ಯುತ್ತಮ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಮೈಸೂರು- ಬೆಂಗಳೂರು, ಬೆಂಗಳೂರು- ಚೆನ್ನೈ ಕಾರಿಡಾರ್ ರಸ್ತೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಅವರು ತಿಳಿಸಿದರು.

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ದಿನದಂದು ದೇಶದಲ್ಲಿ ಸುಮಾರು 86 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದೊಂದು ದೊಡ್ಡ ಸಾಧನೆ. ಆಕ್ಸಿಜನ್ ಪೂರೈಕೆಯನ್ನು 900 ಮೆಟ್ರಿಕ್ ಟನ್‍ನಿಂದ 9 ಸಾವಿರ ಮೆಟ್ರಿಕ್ ಟನ್‍ಗೆ ಹೆಚ್ಚಿಸಿರುವುದು, ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತಗೊಳಿಸಿದ್ದು ಕೂಡ ಕೋವಿಡ್ ಸಂದರ್ಭದ ಸಮರ್ಪಕ ನಿರ್ವಹಣೆಗೆ ಉದಾಹರಣೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವು ಗರೀಬಿ ಹಠಾವೋ ಘೋಷಣೆಯು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದ ಕಾಲದಲ್ಲಿ ಭ್ರಷ್ಟಾಚಾರ ಪ್ರಮಾಣ ಮಿತಿ ಮೀರಿತ್ತು. ಆದರೆ, ಶ್ರೀ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭ್ರಷ್ಟಾಚಾರರಹಿತವಾಗಿ ಯೋಜನೆಯ ಪ್ರಯೋಜನವು ಫಲಾನುಭವಿಗಳಿಗೆ ಲಭಿಸುತ್ತಿದೆ ಎಂದು ತಿಳಿಸಿದರು.

ಜಗನ್ನಾಥ ರಾವ್ ಜೋಶಿ ಅವರ ಒಡನಾಟವು ನನ್ನ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿದೆ ಎಂದು ಪ್ರಲ್ಹಾದ ಜೋಶಿ ಅವರು ವಿವರಿಸಿದರು. ಬೆಂಗಳೂರಿನಿಂದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನೆ ಅವರು ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದರು.
ರಾಜ್ಯ ಪದಾಧಿಕಾರಿಗಳು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಪ್ರಭಾರಿ ಹಾಗೂ ಸಹ ಪ್ರಭಾರಿಗಳು, ವಿಭಾಗ ಸಂಘಟನಾ ಕಾರ್ಯದರ್ಶಿ ಹಾಗೂ ಸಹ ಸಂಘಟನಾ ಕಾರ್ಯದರ್ಶಿಗಳು, ರಾಜ್ಯ ಪ್ರಶಿಕ್ಷಣ ತಂಡ, ಜಿಲ್ಲಾ ಪ್ರಭಾರಿಗಳು, ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಸಂಸದರು, ಶಾಸಕರು, ಎಲ್ಲಾ ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಮತ್ತು ಸಹ ಸಂಚಾಲಕರು ಈ ಪ್ರಶಿಕ್ಷಣ ವರ್ಗದಲ್ಲಿ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts

1 of 103
error: Content is protected !!