ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಫೋರ್ಥ್‌ವೇವ್ ಫೌಂಡೇಶನ್ ವತಿಯಿಂದ ದೇಶಪಾಂಡೆ ನಗರದ ರೋಟರಿ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮ
ಹುಬ್ಬಳ್ಳಿ: ಬೆಳಗಾವಿಯಲ್ಲಿ ಈ ಬಾರಿಯ ಮುಂಗಾರು ಅಧಿವೇಶನ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಧಿವೇಶನ ಎಲ್ಲಿ ನಡೆಸಬೇಕೆಂಬ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಫೋರ್ಥ್‌ವೇವ್ ಫೌಂಡೇಶನ್ ವತಿಯಿಂದ ದೇಶಪಾಂಡೆ ನಗರದ ರೋಟರಿ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ವಿಕಲ ಚೇತನ ಮಕ್ಕಳಿಗೆ ನೀಡಲಾದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕೋವಿಡ್ ಹಿನ್ನಲೆಯಲ್ಲಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಅಧಿವೇಶನ ನಡೆಸಬೇಕಿದೆ. ಅನ್‌ಲಾಕ್ ಆದರೂ ಕೋವಿಡ್ ನಿಯಮಗಳನ್ನು ಜನರು ಮರೆಯಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಹ್ಯಾಂಡ್ ಸೈನಿಟೈಜರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಮೂರನೆ ಅಲೆ ತಡೆಗಟ್ಟಲು ಎಲ್ಲರೂ ಲಸಿಕೆ ಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಅಗತ್ಯ ಇರುವ ಲಸಿಕೆಯನ್ನು ಸಮರ್ಪಕವಾಗಿ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರಾಜ್ಯದ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ವಿಕಲ ಚೇತನ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಪಾಲಕರ ಪಾತ್ರ ಮುಖ್ಯವಾದುದು. ವಿಕಲಚೇತನರ ಪಾಲಕರು ಲಸಿಕೆ ಪಡೆದುಕೊಳ್ಳಬೇಕು ಎಂದರು.
ಪತ್ರಕರ್ತ ಪಶ್ನೆಗಳಿಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲಾ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ. ಪಕ್ಷದ ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ಸೇರಿದಂತೆ ಪಕ್ಷದ ವರಿಷ್ಠರು ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.
ಫೋರ್ಥ್‌ವೇವ್ ಫೌಂಡೇಶನ್ ವತಿಯಿಂದ ಜಿಲ್ಲೆಯ 200 ವಿಕಲ ಚೇತನ ಮಕ್ಕಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ. ಹುಬ್ಬಳ್ಳಿ 75 ಮಕ್ಕಳಿಗೆ ಇಂದು ಕಿಟ್ ನೀಡಲಾಗಿದೆ ಎಂದು ಫೌಂಡೇಶನ್‌ನ ಬಸವರಾಜ ಮ್ಯಾಗೇರಿ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಿಕಲಚೇತನ ಆರೈಕೆ ಕೇಂದ್ರ ಭೇಟಿ ನೀಡಿದರು. 30 ಮಕ್ಕಳಿಗೆ ಕೇಂದ್ರದಲ್ಲಿ ಫಿಜಿಯೋಥೆರಪಿ ನೀಡಲಾಗುತ್ತಿದೆ.
ಉಪನಿರ್ದೇಶಕ ಮೋಹನ ಕುಮಾರ್ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಅಶ್ವಿನಿ ಮಜ್ಜಿಗೆ ಮತ್ತಿತರು ಉಪಸ್ಥಿತರಿದ್ದರು.