Kannada

ಬಸ್ ಗಳ ಸಂಖ್ಯೆ ಹೆಚ್ಚಳ  ಎಲ್ಲಾ ಸೀಟ್ ಭರ್ತಿಗೆ ಅವಕಾಶ;  ಆದಾಯ ಚೇತರಿಕೆ ನಿರೀಕ್ಷೆಯಲ್ಲಿ ಸಾರಿಗೆ ಸಂಸ್ಥೆ

WhatsApp Group Join Now
Telegram Group Join Now

ಹುಬ್ಬಳ್ಳಿ: ಅನ್ ಲಾಕ್ 3.0ರಲ್ಲಿ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದ್ದು ವಾಣಿಜ್ಯ  ವ್ಯವಹಾರಗಳ ಅವಧಿಯನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಲಾಗಿದೆ.ಹೀಗಾಗಿ ಜನರ ಓಡಾಟ ಸಹಜವಾಗಿಯೇ ಹೆಚ್ಚಾಗಲಿದೆ.

ಸೋಮವಾರದಿಂದಲೇ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ಗಳನ್ನು ಹೆಚ್ಚಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಇದರೊಂದಿಗೆ ಬಸ್ ಗಳಲ್ಲಿ   ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಿರುವುದರಿಂದ ಸಾರಿಗೆ ಸಂಸ್ಥೆಯ ಆದಾಯ ವೃದ್ಧಿಗೆ ಬಹಳಷ್ಟು ಸಹಕಾರಿ ಯಾಗಲಿದೆ ಎಂದು ಹುಬ್ಬಳ್ಳಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಲಾಕ್ ಡೌನ್ ನಿರ್ಬಂಧಗಳ ಮತ್ತಷ್ಟು ಸಡಿಲಿಕೆ ಹಾಗೂ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿವೆ.ಕೋವಿಡ್ ಎರಡನೆ ಅಲೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.  ಬಸ್ ಗಳಲ್ಲಿ ಜನರ ಸಂಚಾರವೂ  ಹೆಚ್ಚುತ್ತಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳ ಮಾಡಲಾಗುತ್ತಿದೆ.

ಅನ್ ಲಾಕ್ 2.0 ರಲ್ಲಿ  ಜೂ. 21ರಿಂದ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲಾಗಿತ್ತು.ಅದರೆ ಬಸ್ಸಿನ ಒಟ್ಟು ಆಸನಗಳ ಸಾಮರ್ಥ್ಯದ ಶೇಕಡ 50ರಷ್ಟು ಜನರನ್ನು ಮಾತ್ರ  ಕರೆದೊಯ್ಯಲು ಅವಕಾಶ ನೀಡಲಾಗಿತ್ತು. ಇದರಿಂದ ಸಾರಿಗೆ ಸಂಸ್ಥೆಗೆ ಹೆಚ್ಚಿನ ನಷ್ಟವಾಗುತ್ತಿತ್ತು. ಆದರೂ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಹಾಗೂ ಜನ ಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಬಸ್ ಗಳ ಕಾರ್ಯಾಚರಣೆ ಮಾಡಲಾಗುತ್ತಿತ್ತು.

ಅನ್ ಲಾಕ್ 3.0 ರಲ್ಲಿ ವಾಣಿಜ್ಯ ವ್ಯವಹಾರಗಳ ಅವಧಿಯನ್ನು ರಾತ್ರಿ 9ರವರೆಗೆ ಹೆಚ್ಚಿಸಲಾಗಿದೆ. ಬಸ್ಸಿನಲ್ಲಿರುವ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ.ಇದರಿಂದ ಪ್ರತಿ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸಾರಿಗೆ ಸಂಸ್ಥೆಯ ಆದಾಯ ಸಂಗ್ರಹ ಹೆಚ್ಚಳಕ್ಕೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯೊಳಗಡೆ ತಾಲ್ಲೂಕು ಕೇಂದ್ರಗಳು ಮತ್ತು ಪ್ರಮುಖ ಸ್ಥಳಗಳಿಗೆ ಬಸ್ ಗಳು ಸಂಚರಿಸುತ್ತಿವೆ. ಇನ್ನುಳಿದ ಹಳ್ಳಿಗಳಿಗೆ ಮತ್ತು ಹೊರಜಿಲ್ಲೆಗಳಿಗೆ ಬಸ್ ಸೇವೆ ವಿಸ್ತರಿಸಲಾಗುತ್ತದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ನೆರೆಯ ಜಿಲ್ಲೆಗಳಾದ ಬೆಳಗಾವಿ,  ಗದಗ,ಹಾವೇರಿ, ಶಿರಹಟ್ಟಿ, ಕಲಘಟಗಿ ಕುಂದಗೋಳ, ತಡಸ, ಲಕ್ಷ್ಮೇಶ್ವರ, ಹಾನಗಲ್ ಮುಂತಾದ ಸ್ಥಳಗಳಿಗೆ ನಿರಂತರವಾಗಿ ಬಸ್ಸುಗಳನ್ನು ಬಿಡಲಾಗುತ್ತದೆ.ವಿಜಯಪುರ,ಬಾಗಲಕೋಟೆ,ದಾವಣಗೆರೆ ಮತ್ತಿತರ ಸ್ಥಳಗಳಿಗೆ ಪ್ರಯಾಣಿಕರ  ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ರಾತ್ರಿ ಬಸ್ ಪ್ರಯಾಣಕ್ಕೆ ನಿರ್ಬಂಧವಿಲ್ಲ

ಅನಲಾಕ್ 3.0 ರಲ್ಲಿ  ವಾಣಿಜ್ಯ ವ್ಯವಹಾರ ಗಳಿಗೆ ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದೆ.ಆದರೆ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ದೂರ ಮಾರ್ಗದ ಬಸ್ ಗಳ ಸಂಚಾರ ದಿನಪೂರ್ತಿ ಲಭ್ಯವಿರುತ್ತದೆ. ಜನರು ತಮ್ಮ ಪ್ರಯಾಣದ ಟಿಕೆಟ್, ಅಧಿಕೃತ ದಾಖಲೆ ಮತ್ತು ಗುರುತಿನ ಪತ್ರದೊಂದಿಗೆ ನಿರಾತಂಕವಾಗಿ ಪ್ರಯಾಣ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts

1 of 7
error: Content is protected !!