ಧಾರವಾಡ :ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಲ್ಲಿಯವರೆಗೆ ಯಾವುದೇ ರೀತಿಯ ಜೀವಹಾನಿ ಉಂಟಾಗಿಲ್ಲ ಮತ್ತು ಇಂದು ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 9 ಜನರನ್ನು ಹಾಗೂ 495 ಕುರಿಗಳನ್ನು ರಕ್ಷಿಸಲಾಗಿದೆ. ಜಿಲ್ಲೆಯಲ್ಲಿ ನೆರೆ, ಪ್ರವಾಹ ಪರಿಹಾರ ಕೈಗೊಳ್ಳಲು ಯಾವುದೇ ಆರ್ಥಿಕ ಕೊರತೆ ಇಲ್ಲ. ಜಿಲ್ಲಾಡಳಿತದಲ್ಲಿ ಸುಮಾರು 1.61 ಕೋಟಿ ಹಣ ಇದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಮಳೆಹಾನಿ ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕೈಗೊಳ್ಳು ಪ್ರತಿ ತಾಲೂಕಿಗೆ ಓರ್ವ ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ನಿರಂತರವಾಗಿ ನಿಗಾವಹಿಸಲಾಗಿದೆ.
ಗ್ರಾಮಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮಳೆಯಿಂದ ತೊಂದರೆಗೊಳಗಾದ ಸಾರ್ವಜನಿಕರಿಗೆ ತಕ್ಷಣಕ್ಕೆ ನೆರವಾಗಲು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅಗತ್ಯ ಕ್ರಮ ವಹಿಸಲು ಆದೇಶಿಸಲಾಗಿದೆ. ತಹಶೀಲ್ದಾರರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿನ ತಗ್ಗು ಪ್ರದೇಶ, ಹಳ್ಳ ಮತ್ತು ತೊರೆಗಳ ಪಕ್ಕದ ಪ್ರದೇಶಗಳಲ್ಲಿ ಜಾಗೃತಿ ವಹಿಸುವಂತೆ ಖುದ್ದಾಗಿ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
೨೦೦ ಕುಟುಂಬಗಳ ಸ್ಥಳಾಂತರ
ಅಳ್ನಾವರ ತಾಲೂಕು : ಅಳ್ನಾವರ ತಾಲೂಕಿನಲ್ಲಿರುವ ಹುಲಿಕೇರಿಯ ಇಂದಿರಮ್ಮನ ಕೆರೆಯ ಒಂದು ಭಾಗಕ್ಕೆ ನಿರ್ಮಿಸಿದ್ದ ತಡೆಗೋಡೆ ಸೋರಿಕೆಯಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುತ್ತಿದ್ದು, ಅಳ್ನಾವರ ಪಟ್ಟಣದ ತಗ್ಗು ಪ್ರದೇಶದಲ್ಲಿ ನೆರೆ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಸುಮಾರು 200 ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಕ್ರಮವಹಿಸಲಾಗಿದೆ. ಮತ್ತು ಪಟ್ಟಣದ ಎರಡು ಸ್ಥಳಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮತ್ತು ಅಗತ್ಯವಿದ್ದಲ್ಲಿ ಹೆಚ್ಚಿನ ಕಾಳಜಿ ಕೇಂದ್ರ ಆರಂಭಿಸಲು ಆರು ಸ್ಥಳಗಳನ್ನು ಗುರುತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವ ಕುಂಬಾರಗಣವಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಮಳೆ ಕಡಿಮೆಯಾದ ನಂತರ ಮತ್ತೆ ಸಂಚಾರಕ್ಕೆ ಮುಕ್ತವಾಗಲಿದೆ. ಹಾಗೂ ಇಂದು ಬೆಳಿಗ್ಗೆ ಅತೀಯಾದ ಪ್ರವಾಹ ಬಂದಿದ್ದರಿಂದ ನಾಲ್ಕು ಜಾನುವಾರುಗಳು ನೀರಿನಲ್ಲಿ ಜಾರಿಹೋಗಿದ್ದು, ಮದ್ಯಾಹ್ನದ ನಂತರ ಮತ್ತೇ ಮರಳಿ ಬಂದಿವೆ ಎಂದು ಅವರು ತಿಳಿಸಿದರು.
ಹುಲಿಕೇರಿ ಇಂದಿರಮ್ಮನ ಕೆರೆ ದುರಸ್ತಿಗಾಗಿ ಮರುಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಇನ್ನು ಎರಡ್ಮೂರು ದಿನಗಳವರೆಗೆ ನಿರಂತರವಾಗಿ ನಿಗಾವಹಿಸಿ ಅಗತ್ಯ ಕ್ರಮವಹಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಇದ್ದು, ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು