ಮಂಗಳೂರು,25ಮೇ (ಹಿ.ಸ): ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja)ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿತ್ತು. ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧಾರ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಹರೀಶ್ ಪೂಂಜಾ ಚುನಾವಣೆ ಗೆಲ್ಲಲು 40% ಕಮಿಷನ್ ಹಣ ಹಂಚಿದ್ದಾರೆ. ಬೆಳ್ತಂಗಡಿಯಲ್ಲಿ ಚುನಾವಣೆ ಗೆಲ್ಲಲು ಹಣದ ಹೊಳೆ ಹರಿಸಿದ್ದಾರೆ. ಸುಮಾರು 30 ರಿಂದ 40 ಕೋಟಿ ರೂಪಾಯಿ ಹಣ ಚುನಾವಣೆಯಲ್ಲಿ ಹರೀಶ್ ಪೂಂಜಾ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈಗ ನಮ್ಮ ಸರಕಾರ ಇದೆ ಪೂಂಜಾ ವಿರುದ್ದ ತನಿಖೆ ನಡೆಸುತ್ತೇವೆ ಎಂದರು.
ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂದು ಪೂಂಜಾ ಹೇಳಿದ್ದಾರೆ. ಮೂರೂವರೆ ವರ್ಷ ಇವರದ್ದೇ ಬಿಜೆಪಿ ಸರಕಾರ ಇತ್ತು. ಆಗ ಯಾಕೆ ಈ ಕೊಲೆಗಳ ಬಗ್ಗೆ ತನಿಖೆ ನಡೆಸಲಿಲ್ಲ? ಎಂದು ಪ್ರಶ್ನಿಸಿ ಶಾಸಕ ಪೂಂಜಾ ವಿರುದ್ದ ನಾವು ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ತಯಾರಿ ನಡೆಸುತ್ತಿದ್ದೇವೆ ಎಂದರು.