ಗದಗ :ಜಿಲ್ಲೆಯಲ್ಲಿ ಮೇ 27 ರಿಂದ ಜೂನ್ 1 ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಗೊಳಿಸಲಾಗಿದ್ದ ಕಠಿಣ ಮಾರ್ಗಸೂಚಿಗಳ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಸೋಂಕಿತರ ಪ್ರಮಾಣ ಇಳಿಮುಖವಾಗಿದೆ. ಸಂಪೂರ್ಣ ಲಾಕ್‌ಡೌನ್ ಪರಿಣಾಮಕಾರಿಯಾಗಿದ್ದು ಜೂನ್ 7 ರವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಲಾಕ್‌ಡೌನ್ ಕಠಿಣ ಮಾರ್ಗಸೂಚಿಗಳ ಅನುಷ್ಟಾನದಿಂದ ಸೋಂಕಿತರ ಪ್ರಮಾಣ ಇಳಿಮುಖವಾದ ಹಿನ್ನೆಲೆಯಲ್ಲಿ ಜೂನ್ 7 ರವರೆಗೆ ವಿಸ್ತರಿಸಲಾಗಿದೆ. ಜೂನ್ 1 ಮತ್ತು 2 ರಂದು ದಿನಸಿ ಖರೀದಿ, ಮಾಂಸ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶ ಕಲ್ಪಿಸಿದೆ.
ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ರಾಜ್ಯ ಸರ್ಕಾರ ವಿಧಿಸಿದ ಕೋವಿಡ್ ಮಾರ್ಗಸೂಚಿಗಳನುಸಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಬೀಜ ಗೊಬ್ಬರ , ಕೀಟನಾಶಕಗಳ ಖರೀದಿ ಹಾಗೂ ಯಂತ್ರೋಪಕರಣ ಖರೀದಿಗಾಗಿ ಈವರೆಗೆ ಬೆಳಿಗ್ಗೆ 6 ರಿಂದ 10 ರವರೆಗೆ ನೀಡಲಾಗಿದ್ದ ಸಮಯವನ್ನು ಬೆ 6 ರಿಂದ 12 ರವರೆಗೆ ವಿಸ್ತರಿಸಲಾಗಿದೆ. ಇನ್ನುಳಿದಂತೆ ಜಿಲ್ಲೆಯ ಎಲ್ಲ ಬಾರ್ & ರೆಸ್ಟೋರೆಂಟ್ ಗಳು, ನಗರ ಹಾಗೂ ಗ್ರಾಮೀಣ ಪ್ರದೇಶದ ಹೋಟೆಲ್ ಗಳು ಬಂದ್ ಇರಲಿವೆ.
ಜೂನ್ 7 ರವರೆಗೂ ಸಹ ಹಾಲಿನ ಡೈರಿ ಹಾಗೂ ಹಾಲು ಮೊಸರು ಖರೀದಿಗೆ ಬೆ 6 ರಿಂದ 8 ರವರೆಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ತರಕಾರಿಯನ್ನು ತಳ್ಳುವ ಗಾಡಿ , ಟಂಟA ಗಾಡಿ, ಅಟೋ ರಿಕ್ಷಾ ಗಳಲ್ಲಿ ಬೀದಿ ಬೀದಿ ಸುತ್ತಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಸೋಂಕು ದೃಢ ಪ್ರಕರಣಗಳು ಸದ್ಯಕ್ಕೆ 300 ಕ್ಕಿಂತ ಕಡಿಮೆ ಬರುತ್ತಿದ್ದು ಜಿಲ್ಲೆಯಲ್ಲಿ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಬೆಡ್‌ಗಳು ಲಭ್ಯವಿವೆ. ಸದ್ಯ ಜಿಲ್ಲೆಯಲ್ಲಿ 14710 ಡೋಸ್ ಕೋವಿಶೀಲ್ಡ್ , 4540 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು ಅರ್ಹರು ಪಡೆಯುವಂತೆ ತಿಳಿಸಿದರು.
ಸರ್ಕಾರದಿಂದ ಗದಗ ಜಿಲ್ಲೆಗೆ 50 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಒದಗಿಸಲಾಗಿದೆ. ಇದಲ್ಲದೇ 100 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ದಾನಿಗಳು ನೀಡಿದ್ದಾರೆ. ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು 40 ಲಕ್ಷ ರೂ.ಗಳ ವೆಚ್ಚದಲ್ಲಿ 22 ಕಾನ್ಸನ್‌ಟ್ರೇಟರ್ ಸೇರಿದಂತೆ ಆಕ್ಸಿಜನ್ ಸಿಲೆಂಡರ್ ಹಾಗೂ ವೈದ್ಯಕೀಯ ಸಾಮಗ್ರಿಗಳ ನೆರವು ಒದಗಿಸಿದ್ದಾರೆ.
ನನ್ನ ಶಾಸಕರ ಅನುದಾನದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ 27 ಕಾನ್ಸನ್‌ಟ್ರೇಟರ್ ಖರೀದಿಸಲಾಗಿದೆ. 125 ಆಕ್ಸಿಮೀಟರ್ ಒದಗಿಸಲಾಗುತ್ತಿದೆ. ಇದರ ಜೊತೆಗೆ ಸಣ್ಣ ಕೈಗಾರಿಕಾ ವಲಯದಿಂದ 15 ಬೈ ಪ್ಯಾಕ್ ಒದಗಿಸಲಾಗುತ್ತಿದೆ.
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ 250 ಹೊಸ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ತಮ್ಮ ಅನುದಾನದಲ್ಲಿ 12 ಲಕ್ಷ ರೂ.ಗಳನ್ನು , ಕರ್ನಾಟಕ ಮಿನರಲ್ ಕಾರ್ಪೋರೇಶನ್ ಅವರು 15 ಲಕ್ಷ ರೂ.ಗಳ ನೆರವನ್ನು ನೀಡಿದ್ದಾರೆ ಎಂದರು.
ಒಟ್ಟಾರೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯದ ಎಲ್ಲ ಕ್ರಮಗಳನ್ನು ವಹಿಸಲಾಗುತ್ತಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಸೋಂಕಿನ ಸರಪಳಿ ತುಂಡಿರಿಸಲು ಸಹಕರಿಸಬೇಕು. ಅಗತ್ಯ ಸಂದರ್ಭದಲ್ಲಿ ಮನೆಯಿಂದ ಹೊರ ಬಂದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು . ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಬೇಕು. ಸೋಂಕು ದೃಢಪಟ್ಟಲ್ಲಿ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು, ಜಿ.ಪಂ. ಸಿ.ಇ.ಓ ಭರತ್ ಎಸ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.