Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Kannada

Budget 2023-24 highlights, CM speech in Kannada 1

CM Budget

CM Minister Basavaraj Bommai presented the budget for the year 2023-24 here is the speech of the CM in Kannada.

 1. 2023-24ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

 

 1. ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಚೇತರಿಕೆಗಿಂತ ತೀವ್ರಗತಿಯಲ್ಲಿ ಭಾರತ ಪುಟಿದೆದ್ದಿದೆ. ಇದೇ ಹಾದಿಯಲ್ಲಿ ಕರ್ನಾಟಕವೂ ದೃಢವಾಗಿ ಮುನ್ನಡೆಯುತ್ತಿದೆ.

 

 1. ಜಾಗತಿಕವಾಗಿ ಹಲವಾರು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆರ್ಥಿಕ ಸ್ಥಿರತೆಗಾಗಿ ತೆಗೆದುಕೊಂಡ ಕ್ರಮಗಳ ಫಲವಾಗಿ ಭಾರತವು ಶೇ. 6.5 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿರುವುದು ಗಮನಾರ್ಹವಾಗಿದೆ. ಇದೇ ಸಂದರ್ಭದಲ್ಲಿ G-20 ಶೃಂಗಸಭೆಯ ಅಧ್ಯಕ್ಷತೆ ಭಾರತಕ್ಕೆ ಒಲಿದಿರುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವ ಪ್ರತೀಕವಾಗಿದೆ. ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. G-20 ಶೃಂಗಸಭೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ 14 ಸಭೆಗಳು ನಡೆಯುತ್ತಿರುವುದು, ರಾಜ್ಯದ ಪ್ರಗತಿಪರ ಚಿಂತನೆ ಹಾಗೂ ಮುನ್ನಡೆಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲು ದೊರೆತ ಸುವರ್ಣಾವಕಾಶ ಎಂದು ನಾನು ಭಾವಿಸಿದ್ದೇನೆ.

 

ಹೋಗುತಿದೆ ಹಳೆಯ ಕಾಲ, ಹೊಸ ಕಾಲ ಬರುತಲಿದೆ

ಬರುತಲಿದೆ ಹೊಸ ದೃಷ್ಟಿ, ಹೊಸ ಬಯಕೆಗಳಲಿ

ಹೋಗುತಿದೆ ಹಳೆ ಬಾಳು, ಹೊಸ ಬಾಳು ಬರುತಲಿದೆ.

ಕುವೆಂಪು

 

 1. ಈ ಆಯವ್ಯಯವು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಉಜ್ವಲ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸಾರ್ಥಕ ಭಾವದೊಂದಿಗೆ, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯಗಳು, ಗುರಿಗಳು ಹಾಗೂ ಫಲಿತಾಂಶಗಳ ದೂರದೃಷ್ಟಿಯೊಂದಿಗೆ ಈ ಆಯವ್ಯಯವನ್ನು ಮಂಡಿಸುತ್ತಿದ್ದೇನೆ.

 

 1. ಹಣಕಾಸು ವರ್ಷದ ಮೊದಲ ಎರಡು ತಿಂಗಳಿನಲ್ಲಿಯೇ ಬಹಳಷ್ಟು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಆಯವ್ಯಯದ ಸಕಾಲಿಕ ಹಾಗೂ ತ್ವರಿತ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮಾನವ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಿ, ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ.

 

 1. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮಂತ್ರದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಇತರ ದುರ್ಬಲ ವರ್ಗದವರ ಸ್ವಾಭಿಮಾನದ, ಸ್ವಾವಲಂಬನೆಯ ಬದುಕಿಗೆ ಬೆಂಬಲ ನೀಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಕ್ರಮವಾಗಿ ಶೇ. 15 ರಿಂದ ಶೇ. 17ಕ್ಕೆ ಹಾಗೂ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸುವ ಹಾಗೂ 24,000 ಪೌರ ಕಾರ್ಮಿಕರ ಸೇವೆ ಕಾಖಾಯಂಗ ಮಾಡುವ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದ್ದೇವೆ. ಜನರ ಅಭ್ಯುದಯ, ಅಗತ್ಯಗಳನ್ನೇ ಕೇಂದ್ರೀಕರಿಸಿದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಡಿ.ಬಿ.ಟಿ. ಮೂಲಕ ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳನ್ನು ವಿತರಿಸುವ ಮೂಲಕ ಪಾರದರ್ಶಕತೆ ಮೆರೆದಿದ್ದೇವೆ. ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಶ್ರಮಿಕರ ಕುರಿತ ನಮ್ಮ ಕಾಳಜಿಯನ್ನು ಮೆರೆದಿದ್ದೇವೆ. ಆಸಿಡ್ ದಾಳಿ ಸಂತ್ರಸ್ತರ ಮಾಸಾಶನ 10 ಸಾವಿರ ರೂ. ಗಳಿಗೆ ಹೆಚ್ಚಳ, ವಿವಿಧ ಮಾಸಾಶನಗಳ ಹೆಚ್ಚಳ, ಜನರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಯೋಜನೆಗಳು ಮತ್ತಿತರ ಉಪಕ್ರಮಗಳೊಂದಿಗೆ ಸ್ಪಂದನಾ ಶೀಲ ಸರ್ಕಾರದ ಕರ್ತವ್ಯ ನಿಭಾಯಿಸಿದ್ದೇವೆ.

 

 1. ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಒಕ್ಕಲುತನದ ಪ್ರತಿ ಹಂತದಲ್ಲಿಯೂ ರೈತರಿಗೆ ಬೆಂಗಾವಲಾಗಿ ಪ್ರೋತ್ಸಾಹಿಸಿದ್ದೇವೆ. ಬೆಂಬಲ ಬೆಲೆ ಯೋಜನೆಯಡಿ ದಾಖಲೆ ಪ್ರಮಾಣದ ರಾಗಿ ಖರೀದಿ, ಕುಚ್ಚಲಕ್ಕಿ ಖರೀದಿಗೆ ಅವಕಾಶ ಒದಗಿಸುವುದರೊಂದಿಗೆ ಪ್ರವಾಹ ಸಂದರ್ಭದಲ್ಲಿ NDRF ಪರಿಹಾರ ಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರವನ್ನು ದಾಖಲೆ ಅವಧಿಯಲ್ಲಿ ವಿತರಿಸಲಾಗಿದೆ. ತೊಗರಿ ಬೆಳೆ, ಅಡಿಕೆ ಬೆಳೆಗೆ ರೋಗ ಬಾಧೆ, ರಾಸುಗಳಿಗೆ ಚರ್ಮಗಂಟು ರೋಗಬಾಧೆ ಸಂಭವಿಸಿದಾಗಲೂ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸಲು ಪ್ರಾರಂಭಿಸಲಾದ ರೈತ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಿದ್ದೇವೆ.

 

 1. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಜನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಸ್ಥ, ಸುಶಿಕ್ಷಿತ, ಪ್ರಜ್ಞಾವಂತ ಪೀಳಿಗೆಯ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದೇವೆ. ಉದ್ಯೋಗ ಅವಕಾಶ ಸೃಜನೆಯ ಜೊತೆಗೆ, ಅದಕ್ಕೆ ತಕ್ಕಂತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನೂ ನೀಡುವ ಮೂಲಕ ನಮ್ಮ ನಾಡಿನ ಯುವಕರು ಈ ಅವಕಾಶಗಳ ಸದ್ಬಳಕೆ ಮಾಡುವ ವಾತಾವರಣ ನಿರ್ಮಿಸುತ್ತಿದ್ದೇವೆ. ಪಾಲಿಟೆಕ್ನಿಕ್, ಐಟಿಐ ಹಾಗೂ ಎಂಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ನೀತಿ, ಉದ್ಯೋಗ ನೀತಿ ಮತ್ತಿತರ ಉಪಕ್ರಮಗಳು ಕೈಗಾರಿಕೆಯ ಬೇಡಿಕೆಗೆ ಅನುಗುಣವಾದ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಪೂರಕವಾಗಿವೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ, ನಮ್ಮ ಕ್ಲಿನಿಕ್ ಮತ್ತಿತರ ಕಾರ್ಯಕ್ರಮಗಳ ಮೂಲಕ ದ್ವಿತೀಯ ಮತ್ತು ತೃತೀಯ ಆರೈಕೆಗಳು ಬಡವರಿಗೆ ಸುಲಭವಾಗಿ, ಸುಗಮವಾಗಿ, ಸ್ಥಳೀಯವಾಗಿ ಒದಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.

 

 1. ರಾಜ್ಯದಲ್ಲಿ ಏಕರೂಪದ ಅಭಿವೃದ್ಧಿಯ ಆಶಯದೊಂದಿಗೆ ಕಳೆದ ವರ್ಷ ದೇಶದಲ್ಲಿಯೇ ಮೊದಲ ಬಾರಿಗೆ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಈ ತಾಲ್ಲೂಕುಗಳಲ್ಲಿ ಆಯಾ ಕ್ಷೇತ್ರದಲ್ಲಿ ಸಮಗ್ರ ಹಾಗೂ ಸಂಪೂರ್ಣ ಅಭಿವೃದ್ಧಿಗೆ ಫಲಿತಾಂಶ ಕೇಂದ್ರಿತ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಫಲ ನೀಡಲಿವೆ.

 

 1. ದಾವೊಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಹಾಗೂ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸುವ ಮೂಲಕ ರಾಜ್ಯಕ್ಕೆ ಭಾರಿ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಲಾಗಿದೆ. ಈ ಒಪ್ಪಂದಗಳು ಕಾರ್ಯರೂಪಕ್ಕೆ ಬರಲು ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲಾಗುತ್ತಿದೆ. ಭಾರತ ಸರ್ಕಾರದ ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಇಲಾಖೆಯು Ease of Doing Business ನಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ ಎಂದು ಗುರುತಿಸಿದೆ. ಬೆಂಗಳೂರಿನಿಂದಾಚೆಗೂ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಿರುವುದು, ರಾಜ್ಯದ ಎಲ್ಲ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ, ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ ಹಾಗೂ ಜಲಸಾರಿಗೆಯ ಅವಕಾಶಗಳ ಸದ್ಬಳಕೆಗೆ ಆದ್ಯತೆ, ಬಂದರುಗಳ ಅಭಿವೃದ್ಧಿಗೆ ನೀಡಲಾಗುತ್ತಿರುವ ಮಹತ್ವ ಭವಿಷ್ಯದ ದಿನಗಳಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಿದೆ.

 

 1. ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರ್ಕಾರವು, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಸತತವಾಗಿ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. ಈ ವರ್ಷದ ಕೇಂದ್ರ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಆಯವ್ಯಯದಲ್ಲಿ 5,300 ಕೋಟಿ ರೂ. ಒದಗಿಸಿರುವುದು, ರೈಲ್ವೆ ಯೋಜನೆಗಳಿಗೆ ಅತಿ ಹೆಚ್ಚು ಅಂದರೆ, 7,561 ಕೋಟಿ ರೂ. ಒದಗಿಸಿರುವುದು, ಕರಾವಳಿ ನಿಯಂತ್ರಣ ವಲಯದ ನಿರ್ಬಂಧಗಳನ್ನು ಸಡಿಲಿಸಿ, ಕರಾವಳಿಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿರುವುದು, ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಬೆಂಬಲ ಡಬಲ್ ಇಂಜಿನ್ ಸರ್ಕಾರದ ಕ್ರಿಯಾಶೀಲತೆಗೆ ನಿದರ್ಶನವಾಗಿದೆ.

 

 1. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಮುಂದಿನ 25 ವರ್ಷಗಳು ಅಮೃತ ಕಾಲ, ಕರ್ತವ್ಯದ ಕಾಲ ಎಂದು ಕರೆ ನೀಡಿದ್ದಾರೆ. ಭವ್ಯ ಕರ್ನಾಟಕ ನಿರ್ಮಾಣ ಮಾಡುವ ಆಶಯ ಈ ಆಯವ್ಯಯದ್ದಾಗಿದೆ. ಸ್ವಸ್ಥ, ಸುಶಿಕ್ಷಿತ, ಸ್ವಾವಲಂಬಿ, ಸ್ವಾಭಿಮಾನಿ ಸಮಾಜ ನಿರ್ಮಾಣದ ಮೂಲಕ ಅಭಿವೃದ್ಧಿಯ ಅಮೃತ ಎಲ್ಲರೂ ಸವಿಯುವಂತಾಗಬೇಕು. ಇಂತಹ ಭವಿಷ್ಯದ ಮುನ್ನೋಟವಿರುವ, ವಾಸ್ತವದ ಸವಾಲುಗಳನ್ನು ಮೆಟ್ಟಿ, ಸಮೃದ್ಧ ಕರ್ನಾಟಕದ ಗುರಿಯನ್ನು ಸಾಧಿಸುವ ಹಂಬಲದೊಂದಿಗೆ ಈ ಆಯವ್ಯಯವನ್ನು ಮಂಡಿಸುತ್ತಿದ್ದೇನೆ.

 

ರಾಜ್ಯದ ಅರ್ಥವ್ಯವಸ್ಥೆ

 

 1. ರಾಷ್ಟ್ರೀಯ ಅಂಕಿ ಅಂಶಗಳ ಕಛೇರಿಯಿಂದ ಬಿಡುಗಡೆಯಾದ ಜಿಎಸ್ಡಿಪಿ GSDP ಅಂದಾಜುಗಳಂತೆ ರಾಜ್ಯದ ಆರ್ಥಿಕತೆಯು ಕೋವಿಡ್ ಪೂರ್ವ ಮಟ್ಟವನ್ನು ಮೀರಿ ಚೇತರಿಸಿಕೊಂಡಿದೆ ಎಂದು ಪುನರುಚ್ಚರಿಸಿದೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳಿಂದ ರಾಜ್ಯವು 2022ರಲ್ಲಿ ಹಣದುಬ್ಬರದ ಒತ್ತಡಕ್ಕೆ ಒಳಗಾಯಿತು. RBI ನಿಂದ ಸಮಯೋಚಿತ ಕ್ರಮಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಜನಪರ ನೀತಿಗಳಿಂದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಿದೆ.

 

 1. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಮುಂಗಡ ಅಂದಾಜಿನಂತೆ 2022-23ರಲ್ಲಿ ರಾಜ್ಯವು ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. ವಲಯವಾರು ಬೆಳವಣಿಗೆಯನ್ನು ಗಮನಿಸಿದಾಗ, ರಾಜ್ಯದ ಆರ್ಥಿಕತೆಯ ಬೆಳವಣಿಗೆಗೆ ಸೇವಾ ಮತ್ತು ಕೈಗಾರಿಕೆ ವಲಯವು ಪ್ರಮುಖ ಕಾರಣವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2022-23ರಲ್ಲಿ ಸೇವಾ ವಲಯವು ಶೇ.9.2 ರಷ್ಟು ಮತ್ತು ಕೈಗಾರಿಕಾ ವಲಯವು ಶೇ.5.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಕಾಲಿಕ ಹವಾಮಾನ ಪರಿಸ್ಥಿತಿಗಳ ಹೊರತಾಗಿಯು ಕೃಷಿ ವಲಯವು ಶೇ.5.5 ರಷ್ಟು ಬೆಳವಣಿಗೆಯನ್ನು ಹೊಂದಿದೆ. ಇದೆಲ್ಲವುಗಳ ಪರಿಣಾಮವಾಗಿ ರಾಜ್ಯದ ತಲಾ ಆದಾಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2.04 ಲಕ್ಷ ರೂ. ಗಳಿಂದ 3.32 ಲಕ್ಷ ರೂ. ಗಳಿಗೆ ಹೆಚ್ಚಿದೆ.

 

 1. ಆರ್ಥಿಕ ವರ್ಷ 2022-23ರ ಹೆಚ್ಚಿನ ಜಿ.ಎಸ್.ಡಿ.ಪಿ. GSDP ಬೆಳವಣಿಗೆ ದರವು ಬಂಡವಾಳ ವೆಚ್ಚವನ್ನು ಹೆಚ್ಚಿಸಲು, ಹೂಡಿಕೆಯನ್ನು ಆಕರ್ಷಿಸಲು ಮತ್ತು ಬೃಹತ್ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಠಿಸಲು ರಾಜ್ಯ ಸರ್ಕಾರವು ಕೈಗೊಂಡ ಕೇಂದ್ರೀಕೃತ ಕ್ರಮಗಳಿಗೆ ಪ್ರತಿಬಿಂಬವಾಗಿದೆ.

 

ರಾಜ್ಯದ ಹಣಕಾಸು ಪರಿಸ್ಥಿತಿ

 

 1. 2022-23ರಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿಯು ಸದೃಢವಾಗಿದ್ದು, ಉತ್ತಮ ಬೆಳವಣಿಗೆ ಕಂಡಿದೆ. ಆರ್ಥಿಕ ಚಟುವಟಿಕೆಗಳ ವೃದ್ಧಿಯಿಂದ ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ.

 

 1. ಆರ್ಥಿಕ ಬೆಳವಣಿಗೆಯೊಂದಿಗೆ ಬೇಡಿಕೆ ಹೆಚ್ಚಾದ್ದರಿಂದ ವಾರ್ಷಿಕ GST ಸಂಗ್ರಹಣೆಯು 2021-22ರ ಜನವರಿ ತಿಂಗಳ ಅಂತ್ಯಕ್ಕೆ ಹೋಲಿಸಿದರೆ ಶೇ.26 ರಷ್ಟು ಬೆಳವಣಿಗೆಯಾಗಿರುತ್ತದೆ. ಅದೇ ರೀತಿ ಮೋಟಾರು ವಾಹನಗಳ ತೆರಿಗೆ ಮತ್ತು ಮುದ್ರಾಂಕ ಮತ್ತು ನೋಂದಣಿ ಶುಲ್ಕವು ಸಹ ಹೆಚ್ಚಳವಾಗಿರುತ್ತದೆ. ಒಟ್ಟಾರೆಯಾಗಿ, ಆರ್ಥಿಕ ವರ್ಷ 2021-22ಕ್ಕೆ ಹೋಲಿಸಿದರೆ ಜನವರಿ ಅಂತ್ಯದವರೆಗೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹವು ಶೇ. 21 ರಷ್ಟು ಹೆಚ್ಚಾಗಿದೆ.

 

 1. ಕೇಂದ್ರ ಸರ್ಕಾರದ ನೇರ ಮತ್ತು ಪರೋಕ್ಷ ತೆರಿಗೆಯ ಹೆಚ್ಚಳದಿಂದ ರಾಜ್ಯದ ತೆರಿಗೆ ಪಾಲು 4,813 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಮುಂದುವರೆದು ಕೇಂದ್ರ ಸರ್ಕಾರವು 2023-24 ನೇ ಸಾಲಿಗೆ ರಾಜ್ಯಕ್ಕೆ 37,252 ಕೋಟಿ ರೂ.ಗಳ ತೆರಿಗೆ ಪಾಲನ್ನು ಅಂದಾಜಿಸಿದೆ. ಇದು 2022-23ರ ಆಯವ್ಯಯ ಅಂದಾಜಿಗೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರವು ರಾಜ್ಯದ ತೆರಿಗೆ ಪಾಲನ್ನು ಹೆಚ್ಚಿಸಿರುವುದರಿಂದ ರಾಜ್ಯ ಸರ್ಕಾರವು ವಿತ್ತೀಯ ಸುಸ್ಥಿರತೆಯನ್ನು ಕಂಡುಕೊಳ್ಳಲು ಸಹಕಾರಿಯಾಗಲಿದೆ.

 

 1. ರಾಜ್ಯದ ಸ್ವಂತ ರಾಜಸ್ವ ಸಂಗ್ರಹಣೆ ಮತ್ತು ಕೇಂದ್ರ ಸರ್ಕಾರದ ತೆರಿಗೆ ಪಾಲಿನ ಹೆಚ್ಚಳವು 2022-23ರ ಪರಿಷ್ಕೃತ ಅಂದಾಜಿನಲ್ಲಿ ರಾಜ್ಯದ ರಾಜಸ್ವ ಕೊರತೆಯನ್ನು 8,703 ಕೋಟಿ ರೂ.ಗಳಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರೊಂದಿಗೆ ವಿತ್ತೀಯ ಸುಸ್ಥಿರತೆಯ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಂದಾಜಿಸಿದ ಸಾಲವನ್ನು ಪೂರ್ಣಪ್ರಮಾಣದಲ್ಲಿ ಪಡೆಯದೆ ನಿಯಂತ್ರಿಸಲಾಗುವುದು.

 

 1. ಕೋವಿಡ್-19 ಪಿಡುಗಿನ ಕೆಲವು ವರ್ಷಗಳನ್ನು ಹೊರತುಪಡಿಸಿದರೆ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರಲ್ಲಿ ನಿರ್ದಿಷ್ಟಪಡಿಸಲಾದ ವಿತ್ತೀಯ ಮಾನದಂಡಗಳನ್ನು ರಾಜ್ಯವು ಪಾಲಿಸುತ್ತಾ ಬಂದಿದೆ. ಆದಾಗ್ಯೂ ಕೋವಿಡ್-19 ಪಿಡುಗಿನಿಂದಾಗಿ, ರಾಜ್ಯದ ಆರ್ಥಿಕ ಪರಿಸ್ಥಿತಿಯು ತೀವ್ರವಾಗಿ ಬಾಧಿಸಲ್ಪಟ್ಟಿದ್ದು, ಇದರಿಂದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡಗಳ ಪಾಲನೆಯಾಗಿಲ್ಲ.

 

 1. ಆದರೆ, ನಮ್ಮ ಸರ್ಕಾರವು ಅನುಷ್ಠಾನಗೊಳಿಸಿದ ಹಲವಾರು ಪ್ರಗತಿಪರ ನೀತಿಗಳ ಪರಿಣಾಮವಾಗಿ ಹಾಗೂ ವಿತ್ತೀಯ ಕ್ರೋಡೀಢೀಕರಣ ಮತ್ತು ವಿತ್ತೀಯ ಶಿಸ್ತಿಗೆ ತೋರಿದ ಅಚಲ ಬದ್ಧತೆಯಿಂದಾಗಿ ರಾಜ್ಯದ ಆರ್ಥಿಕತೆಯನ್ನು ಪುನಃ ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗಿರುತ್ತದೆ. ರಾಜಸ್ವ ಸಂಗ್ರಹಣೆ ಇಲಾಖೆಗಳಿಗೆ ತೆರಿಗೆ ಸಂಗ್ರಹಣೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿ ಹಾಗೂ ತೆರಿಗೆ ಸಿಬ್ಬಂದಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿ, ರಾಜ್ಯದ ರಾಜಸ್ವಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆನೆ. ನಮ್ಮ ಸರ್ಕಾರದ ಸಂಘಟಿತ ಪ್ರಯತ್ನಗಳ ಫಲವಾಗಿ ಇಂದು, ನಾನು ಈ ಘನ ಸದನದಲ್ಲಿ 2023-24ನೇ ಸಾಲಿನ ಆಯವ್ಯಯವನ್ನು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002ರ ಎಲ್ಲಾ ಮಾನದಂಡಗಳನ್ನು ಪೂರೈಸುವ ಮೂಲಕ ರಾಜಸ್ವ ಹೆಚ್ಚಳದ ಆಯವ್ಯಯವನ್ನು (Revenue Surplus Budget) ಮಂಡಿಸುತ್ತಿದ್ದೇನೆಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ.

The Hubli Express is on WhatsApp now, you can join the WhatsApp group by clicking the link >>>>>  https://chat.whatsapp.com/Hrmohnx3bkrEJRIv9kQsyD  >>>>>>> You can follow us on Facebook @HubliExpress

 

Leave a Reply