ಹುಬ್ಬಳ್ಳಿ: ಬೈಕಿನಲ್ಲಿ ತೆರಳುತ್ತಿದ್ದ ಯುವಕನೋರ್ವನಿಗೆ ಲಾಠಿ ಬೀಸಿದ ಪರಿಣಾಮ ತಲೆಗೆ ಗಂಭೀರ ವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಿಮ್ಸ್ ಗೆ ಶಿಫಾರಸ್ಸು ಮಾಡಲಾಗಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡಿ ಪಂಪ್ ಬಳಿ ಈ ಘಟನೆ ನಡೆದಿದೆ. ಹಳೇ ಹುಬ್ಬಳ್ಳಿ ಠಾಣೆ ಪಿ.ಎಸ್.ಐ ಸುಖಾನಂದ ಶಿಂಧೆ ಲಾಠಿ ಬೀಸಿದ್ದು, ಇಲ್ಲಿನ ಹಳೇ ಹುಬ್ಬಳ್ಳಿ ನಿವಾಸಿ ರೆಹಮತ್ ಕಾರತಗರ ಗಾಯಗೊಂಡ ಯುವಕನಾಗಿದ್ದಾನೆ. ಲಾಠಿ ಬೀಸಿದ ರಭಸಕ್ಕೆ ಬೈಕ್ ಮೇಲಿಂದ ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಕಿಮ್ಸ್ ಗೆ ಶಿಫಾರಸ್ಸು ಮಾಡಲಾಗಿದೆ.
ಎಟಿಎಂಗೆ ಹೊರಟಿದ್ದ ಯುವಕ: ಬೆಳಿಗ್ಗೆ ೬ ರಿಂದ ೧೨ ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಸ್ತುಗಳ ಖರೀದಿಗೆ ಹಣ ಬೇಕಾಗಿದ್ದರಿಂದ ಎಟಿಎಂಗೆ ಹೊರಟಿದ್ದ. ಈ ಸಂದರ್ಭದಲ್ಲಿ ಇಂಡಿಪಂಪ್ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಈ ಅವಘಡ ನಡೆದಿದೆ. ಘಟನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಿ.ಎಸ್.ಐ ವಿರುದ್ದ ಪ್ರಕರಣ ದಾಖಲು ಮಾಡುವುದಾಗಿ ಗಾಯಗೊಂಡ ಯುವಕನ ಸಂಬಂಧಿಕರು ತಿಳಿಸಿದ್ದಾರೆ.
ಇನ್ನೂ ಪ್ರಕರಣದ ಬಗ್ಗೆ ಮಾತನಾಡಿರುವ ಡಿಸಿಪಿ ಕೆ ರಾಮರಾಜನ್ ವಿಚಾರಣೆಯ ನಂತರ ಪಿ,ಎಸ್.ಐ ತಪಿತಸ್ಥ ಎಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಬಗ್ಗೆ ಇನ್ನೂ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಅವರು ಹುಬ್ಬಳ್ಳಿ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ